Friday, September 4, 2009

ನಿಮ್ಮ ನೆನಪಿನಲ್ಲಿ......

೩ ವರ್ಷಗಳ ಹಿಂದೆ, ಮಂಗಳಕ್ಕನ ಮನೆಗೆ ರಜೆಗೆ ಹೋಗಿ, ಅಲ್ಲಿಂದ ಮರಳಿ ಬರುವಾಗ ಹೃದಯ ಭಾರವಾಗಿ ಬರೆದ ಸಾಲುಗಳಿವು..... ನಿಮ್ಮನ್ನೆಲ್ಲ... ಮಂಗಳ... ತ್ರಿವೇಣಿ... ಜ್ಯೋತಿ... ಸುಶ್ಮ... ಮನಸ್ಸು.. ಪದೇ ಪದೇ ನೆನಪಿಸಿಕೊಳ್ತಾಯಿರುತ್ತೆ... ನಿಮ್ಮ ನೆನಪಿಗೆ....


ಹೊಸ ಬೆಳಕಿನ ಸುಧೆ ಸವಿಯುವ ಮುಂಜಾನೆಯ ಸಮಯದಿ
ಹೃದಯ ತುಂಬಿ ಬರುತಲಿಹುದು ನಿಮ್ಮ ನೆನಪಿನ ಹರುಷದಿ


ಸಾಗುತಿತ್ತು ಜೀವನ ಗುರಿ ಅರಿಯದಾವುದೋ ಹಾದಿಲಿ
ಅಲ್ಲಿ ನಿಮ್ಮ ಕಂಡು ಬಂದೆ ಮಗುವು ಬರುವ ತೆರದಲಿ
ಎಂತು ಹೋಗುತ್ತಿತ್ತೋ ಅರಿಯೆ ಅರಿವೆ ಕಾಣದಾ ಬದುಕು
ಈಗ ನಿಮ್ಮ ಪ್ರೀತಿ ಕಿರಣ ಅದಕು ಇದಕು ಎದಕು...

ಮನಕೆ ನಿಲುಕದಾಗಿದೆ ಸಂಬಂಧಗಳ ಈ ಒಗಟು
ಕೂಡಿ ಹುಟ್ಟದಿದ್ದರೂ ಬೆಸೆದಿಹುದು ನೇಹ ಸೊಗಡು
ನಿಮ್ಮ ಕೂಡಿ ಕಳೆದ ಆ ದಿನಗಳ ಸವಿ ನೆನಪು
ಮತ್ತೆ ಮತ್ತೆ ತರುತಲಿಹುದು ಹೊಸ ಕಾಂತಿ ಹೊಳಪು

ಇಂತು ಬಾಳ ಪಯಣ ನಡೆಯೆ ನದಿಯು ಹರಿವ ಚಂದದಿ
ಅಡೆ ತಡೆಗಳ ಹಾದಿ ಮೀರಿ ಸೇರುವಂತೆ ಜಲಧಿ!
ನಿಮ್ಮ ನೆನಹಿನ ಸೊಗಸು ಸೆಳೆಯುತಿರಲು ಮನವನು
ಮತ್ತೆ ಬರುವೆ ನಿಮ್ಮ ಸಂಗ ಸವಿಯೆ ಸ್ನೇಹ ಸವಿಯನು!! :)


ಪ್ರೀತಿಯಿಂದ....

ಪ್ರವೀಣ :)

Saturday, July 18, 2009

ಅಪರಾಧಿ ನಾನಲ್ಲ........

ಬೆಂಗಳೂರಿಗೆ ವರ್ಗಾವಣೆಯಾಗಿ ಬಂದು ಸುಮಾರು ೩ ತಿಂಗಳಾಯ್ತು! ಬಂದಾಗಿಂದ, ಬ್ಲಾಗಿಗೆ ಬರಗಾಲ ಬಂದಿದೆ ಅಂತ ಅನ್ನಿಸ್ತಿದೆ. ಇದಕ್ಕೆ ಬ್ಲಾಗ್ ಓನರ್ ಕಾರಣ ಅಂತ ಅನ್ಕೊಳ್ಬಾರ್ದು ಅಂತ ನನ್ನ ಸವಿನಯ ಮನವಿ! ಬರೀಬೇಕು ಅಂತ ಬಹಳ ಸರ್ತಿ ಯೋಚನೆ ಮಾಡ್ದೆ, ಆದರೆ, ಯೋಜನೆ, ಯೋಚನೆ ಹಂತದಲ್ಲೇ ನಿಂತ್ಕೊಂಡುಬಿಡ್ಬೇಕೇ!! ಅದಕ್ಕೂ ಕಾರಣ ನಾನಲ್ಲ! ಊರು, ನಮ್ಮೂರಾದ್ರೂ, ಕೆಲ್ಸ ಅಂತ ಇರುತ್ತೆ ನೋಡಿ! ಹೊಸ ಕಡೆ, ಹೊಸ ವಾತಾವರಣ, ಅಲ್ಲಿನ ಬೇಡಿಕೆಗಳು, ಇವೆಲ್ಲ ತಲೆ ತುಂಬ. ಅದೂ ಅಲ್ದೆ, ಆ ಕಾಟ್ ಜಾಗದಿಂದ ಇನ್ನೂ ಪೂರ್ತಿಯಾಗಿ ಸಾಮಾನುಗಳನ್ನೆಲ್ಲ.. ಸಾಗಿಸಿರ್ಲಿಲ್ಲ.. ಒಂದೆರಡು ವಾರ ಅದರ ಓಡಾಟ ಆಯ್ತು, ಅದಾದ್ಮೇಲಾದ್ರೂ ಬರೀಬಹುದಿತ್ತಲ್ಲ ಅಂತ ಕೇಳ್ತೀರ... ನಿಜವೇ... ಆದ್ರೆ, ವಾರಾಂತ್ಯದಲ್ಲೇ ಬರೀಬೇಕು ಅಂತ.. ಏನೋ ಒಂದು ಚಟ.. ಯಾವಾಗ್ಲೋ ಬರೋ ಯೋಚನೆಗಳಿಗೆಲ್ಲ, ವಾರಾಂತ್ಯದಲ್ಲೇ ಬಾ..ಅಂತ ಹೇಳಿದ್ರೆ.. ಅವೂ ನನ್ಮಾತು ಕೇಳ್ಬೇಕಲ್ಲ! ತಮ್ಮದೇ ಹಟ...ತಮ್ಮದೇ ದಾರಿ ಇವಕ್ಕೆ!

ವಾರಾಂತ್ಯ ನನಗೊಬ್ಬನಿಗೇ ಅಂತಂದ್ರೆ, ಅದೊಂದು ವಿಷ್ಯ, ಆದರೆ, ಅದು ಎಲ್ಲರಿಗೂ ವಾರಾಂತ್ಯನೇ ಅಲ್ವ?! ಸರಿ, ಬರೆಯೋದರ ಜೊತೆಗೆ, ಸುತ್ತಾಡೋದು, ಮಾತಾಡೋದು, ಬಂಧು, ಬಳಗ ಎಲ್ಲ ಸೇರ್ಕೊಂಡು ಬಿಡುತ್ವೆ, ಏತನ್ಮಧ್ಯೆ, ಡಿ.ವಿ.ಜಿ ಅವರು ಹೇಳೋ ಹಾಗೆ, ತಲೆನಲ್ಲಿ ಕಾಗೆ, ಗೂಬೆ, ಕೋಗಿಲೆ, ನವಿಲು, ಗುಬ್ಬಚ್ಚಿ, ಎಲ್ಲಾ ಕೂಗುಗಳು ಸೇರಿ ಹೋಗಿ, ಈ ಗದ್ದಲದಲ್ಲಿ, ಪಾಪ ಬರವಣಿಗೆಗೆ ಬೇಕಿರೋ ಸ್ಫೂರ್ತಿ ಅನ್ನೋ ಮರಿಯ ಸದ್ದು ಎಲ್ಲೋ ಅಡಗಿಹೋಗುತ್ತೆ! ಈ ಮರಿ ಬೆಳೆದು, ಆ ಬೇರೆ ಎಲ್ಲಾ ಗದ್ದಲಗಳನ್ನೂ ಮೀರಿ ಗಲಾಟೆ ಮಾಡೋಕೆ, ಇಷ್ಟು ದಿನ ಬೇಕಾಯ್ತು ನೋಡಿ!

ಅಂತೂ, ಇಂತೂ ಸದ್ಯ ಬಂತಲ್ಲ!! ಏನೋ ಒಂದಷ್ಟು ಮಾತುಗಳಿಗೆ, ಪದಗಳ ರೂಪ ಕೊಟ್ಟು, ಕೀಲಿಮಣೆ ಮೇಲೆ ಟಕಟಕಿಸಿದ್ದು ಆಯ್ತು. ಇನ್ಮುಂದೆ, ಹೀಗೆಲ್ಲ, ಧೂಳು ಹಿಡಿಯೋಕೆ ಆಸ್ಪದ ಕೊಡಲ್ಲ... ಏನೋ ಒಂದು... ಹರಟ್ತಾಯಿರ್ತೀನಿ... ಕೇಳೋದು, ಓದೋದು.. ನಿಮಗೆ ಬಿಟ್ಟಿದ್ದು ಅಷ್ಟೇ! :)

Thursday, April 2, 2009

ಋಣವೆಂಬ ಸೂತಕ

"ಎಲ್ಲ ಮರೆತಿರುವಾಗ....ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ".. ಕೇಳ್ತಾಯಿದ್ದೆ. ಅದೆಷ್ಟು ಸರ್ತಿ ಈ ಹಾಡು ಕೇಳಿದ್ದೀನೋ, ಲೆಕ್ಕ ಇಟ್ಟಿಲ್ಲ. ಆದರೆ ಪ್ರತೀ ಬಾರೀ ಕೇಳಿದಾಗಲೂ ಹೃದಯ ಭಾರಿ ಆದದ್ದುಂಟು. ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ, ಎಷ್ಟೋ ಕಳಚಿ ಹೋಗುತ್ವೆ, ಆದರೆ ಈ ನೆನಪುಗಳ ಋಣವನ್ನ ಹೆಗಲ ಮೇಲೆ ಹೊರಿಸಿಬಿಟ್ಟು ಹೋಗುತ್ವೆ. ಸಂಬಂಧಗಳೇ ಹೀಗೆ ಅಂತ ಅನ್ಕೊಂಡು ಯಾವುದನ್ನೂ ಅಂಟಿಸಿಕೊಳ್ದೆ ಸುಮ್ನೆ ಇದ್ಬಿಡ್ಬಹುದೇನೋ... ಆದರೆ ಹೃದಯ ಕೇಳ್ಬೇಕಲ್ವ? ಅದಕ್ಕೆ ಈ ನೆನಪುಗಳೂ ಬೇಕು, ಅವು ಕೊಡೋ ಕಹಿ, ಸಿಹಿ ರುಚಿಯೂ ಬೇಕು. ಒಂದನ್ನ ತಗೊಂಡ್ರೆ ಇನ್ನೊಂದು ಫ್ರೀ!
ನೆನಪು ತಾನೆ? ಈ ಋಣದಲ್ಲಿ ಕೆಲವೊಂದನ್ನ ಇಟ್ಕೊಂಡು, ಮಿಕ್ಕಿದ್ದನ್ನ ಮರ್ತುಬಿಟ್ರಾಯ್ತು ಅಂತ ಸಲೀಸಾಗಿ ತಪ್ಪಿಸಿಕೊಳ್ಳೋ ಜಾಯಮಾನ ನಂದು. ಆದರೆ, ಬೆನ್ನು ಹತ್ತಿರೋ ಸಾಲಗಾರರ ಥರ, ಒಂದಲ್ಲ ಒಂದು ಮೂಲೆನಲ್ಲಿ, ಎಲ್ಲೋ ತಿರುವಿನಲ್ಲಿ, ಹಿಡಿದುಬಿಡುತ್ತೆ, ಪುನಃ ಹಿಂದಿನ ಕಡತಗಳನ್ನೆಲ್ಲಾ ತೆರೆದಿಡುತ್ತೆ. ನಾ ಮಾಡಿದ್ದು, ತಾ ಮಾಡಿದ್ದು, ಎಲ್ಲಾ ದಾಖಲೆಗಳೂ ಆಚೆ, ತಕ್ಕಡಿನಲ್ಲಿ ಎರಡನ್ನೂ ಹಾಕಿ, ತಪ್ಪು ಒಪ್ಪುಗಳನ್ನ ಅಳೆಯೋ ಸರದಿ ಆಗ. ತಕ್ಕಡಿ ಸಮನಾಗಿ ಇರೋ ಪ್ರಸಂಗಗಳೇ ಕಡಿಮೆ... ಬಹಳಷ್ಟು ಸರ್ತಿ ಏರುಪೇರು! ಹೀಗೆ ಆದಗಲೇನೇ, ಯಾರು ಯಾರಿಗೆ ಎಷ್ಟೆಷ್ಟು ಲೆಕ್ಕ ಚುತ್ತಾ ಮಾಡ್ಬೇಕು ಅನ್ನೋ ಬಾಬ್ತು ಬರೋದು.
ಬಹಳ ಋಣಗಳು ಹೀಗೇ ಹೆಗಲ ಮೇಲೆ ಹೊತ್ಕೊಂಡ್ರೆ, ಮನುಷ್ಯ ಮುಂದೆ ನಡೆಯೋದಾದ್ರೂ ಹೇಗೆ? ಹಗುರವಾದ ನೆನಪುಗಳು, ಸವಿ ನೆನಪುಗಳು ಬೇಕು... ಅದಕ್ಕೆ ಸಂಬಂಧಗಳು ಹಸನಾಗಿ ಕೂಡಬೇಕು.. ಹೀಗೆ ಕೂಡಬೇಕು ಅಂದ್ರೆ, ಸಂಬಂಧದಲ್ಲಿ ನಾನು ನೀನು ಬಿಟ್ಟು, ನಾವು ಅನ್ನೋದು ಬರ್ಬೇಕು. ಅದು ಎಲ್ಲಾ ಸಂಬಂಧದಲ್ಲಿ ಬರೊಲ್ಲ, ಎಲ್ಲರ ಜೊತೆ ಆಗೊಲ್ಲ. ಹೀಗಾಗಿನೇ, ನೆನಪುಗಳ ಋಣವೆಂಬ ಸೂತಕ ಬಲು ಭಾದೆಗೊಳಿಸುತ್ತೆ... ಇದನ್ನ ಪರಿಹರಿಸೋ ಗುಣದ ’ನಿಧಿ’ ಕೂಡ ನಮ್ಮೊಳಗೇ ಇದೆ!

Monday, March 23, 2009

ಬಂತು ಯುಗಾದಿ ಹಬ್ಬ......

ಮನುಷ್ಯ ತನ್ನನ್ನ ತಾನೇ ಎಷ್ಟೇ ಹೊಗಳಿಕೊಂಡ್ರೂ, ಪ್ರಕೃತಿಗೆ ಬಹುಶಃ ಮನುಷ್ಯನನ್ನ ಲೇವಡಿ ಮಾಡೋ ಆಸೆ ಇತ್ತೋ ಏನೋ ಕಾಣೆ! ದ.ರಾ.ಬೇಂದ್ರೆ ಅವರು ಹೇಳೋ ಹಾಗೇ... ನಮಗೆ ಮಾತ್ರ ಒಂದೇ ಒಂದು ಜನ್ಮ, ಅದರಲ್ಲೂ, ಒಂದೇ ಬಾಲ್ಯ, ಒಂದೇ ಹರೆಯ, ... ಆದರೆ ಪ್ರಕೃತಿಯಲ್ಲಿ ಹಾಸು ಹೊಕ್ಕಾಗಿರೋ ಗಿಡ ಮರಗಳಿಗೆಲ್ಲ..? ಯುಗ ಯುಗಾದಿ ಕಳೆದರೂ, ಮರಳಿ ಬರೋ ಯುಗಾದಿಯ ಕೊಡುಗೆ! ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆ.. ಇವರಿಗೆಲ್ಲ! ವಸಂತನ ಆಗಮನವಾಗಿ ಎಲ್ಲ ಹೊಂಗೆ ತೊಂಗೆಯಲ್ಲಿ ಸಂತಸ ತುಂಬಿ ನಲಿಯುವ ಯುಗಾದಿ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಬರ್ತಾಯಿದೆ. ಇಡೀ ಸೃಷ್ಟಿ ನವನವೋಲ್ಲಾಸದಿಂದ ಕಂಗೊಳಿಸ್ತಾಯಿದ್ರೆ, ಮನುಷ್ಯ, ನಕ್ಷತ್ರಗಳನ್ನ, ಗ್ರಹಗಳನ್ನ, ಲೆಕ್ಕ ಹಾಕಿ ಬರೋ ವರ್ಷದ ಫಲದಲ್ಲಿ ಮೈ ಮರೆತಿರ್ತಾನೆ!
ಪಂಚಾಂಗ, ಜಾತಕಗಳೆಲ್ಲ ಹೊರಗೆ ಬಂದಿರುತ್ತೆ... ಜೊತೆಗೆ, ಎಲ್ಲ ಜ್ಯೋತಿಷ್ಯರ ಮನೆ ಮುಂದೆ ಸರತಿಯ ಸಾಲು. ಈಗೀಗ ಅದಿಲ್ಲ ಬಿಡಿ, ಎಲ್ಲ ಚಾನೆಲ್ನಲ್ಲಿ ಬರುತ್ತೆಲ್ಲ... ಅಲ್ಲಿಗೆ ಫೋನ್ ಮಾಡಿದ್ರೆ ಕಥೆ ಮುಗೀತು! ಮರಗಳಿಗೆ ಇದರ ಚಿಂತೆ ಇದೆಯೆ? ಮನುಷ್ಯ ತನ್ನ ಬಗ್ಗೆ ತಾನೇ ಅದೆಷ್ಟೇ ಬೀಗಿದ್ರೂ, ಪ್ರಕೃತಿಯ ಮುಂದೆ ಅದೆಷ್ಟು ಕುಬ್ಜ ಆಗ್ಬಿಡ್ತಾನೆ ಅಲ್ವ? ಆಯಾ ಮಾಸಕ್ಕೆ, ಆಯಾ ಋತುವಿಗೆ ಅನುಗುಣವಾಗಿ ಎಲ್ಲವೂ ನಡೆಯುತ್ವೆ! ಮನುಷ್ಯನನ್ನ ಬಿಟ್ಟು! ಬೇಸಿಗೆಯಲ್ಲಿ, ಚಳಿಯನ್ನ, ಚಳಿಗಾಲದಲ್ಲಿ ಬಿಸಿಲನ್ನ ಬಯಸೋ ವಿಚಿತ್ರ ಪ್ರಾಣಿ ಅಂದ್ರೆ ಮನುಷ್ಯ ಒಬ್ನೇ! ಕಷ್ಟ ಬಂದಾಗ ಸುಖ ಬಯಸ್ತೀವಿ, ಸುಖ ಬಂದಾಗ, ಮತ್ತಷ್ಟೂ ಹೆಚ್ಚು ಸುಖ. ನಮ್ಮ ಮನಸ್ಸಿಗೆ ಒಪ್ಪಿಗೆ ಆಗೋದೊಂದೇ ಒಳ್ಳೇದು, ಮಿಕ್ಕಿದ್ದೆಲ್ಲಾ ಕೆಟ್ಟದ್ದು! ಪ್ರಕೃತಿನಲ್ಲಿ ಎಲ್ಲಕ್ಕೂ ಸ್ಥಾನ ಇದೆ. ಅದು ಒಳ್ಳೇದು ಕೆಟ್ಟದ್ದು ಅನ್ನೋ ತುಲನೆ ಮಾಡೊಲ್ಲ! ನಿಜವಾದ ನಿರ್ಗುಣೆ! ದಿಟವಾಗಿ ಸ್ಥಿತಪ್ರಜ್ಞೆ! ಯುಗಾದಿಯ ಮಹತ್ವ ಕೂಡ ಇದರಲ್ಲೇ ಅಡಗಿರೋದು! ಬೇವು ಬೆಲ್ಲ... ಜೊತೆಯಾಗಿ ಸವಿಬೇಕು. ಕಷ್ಟ ಸುಖ ಜೊತೆಯಾಗಿ ಸಮನಾಗೆ ಸ್ವೀಕರಿಸಬೇಕು. ಯುಗಾದಿ ಬಂದಾಗ ಪ್ರಕೃತಿಯೊಂದೇ ಅಲ್ಲ, ಮನುಷ್ಯ ಸಹಿತ ಮನಸ್ಸಿನಲ್ಲಿ ಪುನಃ ಹೊಸದಾದ ಜೀವನವನ್ನ ಪಡೀಬೇಕು! ಕಷ್ಟ ಬಂದಾಗ ಕುಗ್ಗದೆ, ಪುನಃ ಬರುವ ವಸಂತನ ಆಗಮನಕ್ಕೆ ಕಾದಿದ್ದು, ಸಂತೃಪ್ತಿಯ ಕಾಲ ಕೂಡಿಬಂದಾಗ, ಚಿಗುರೊಡೆದು ಜೀವನವನ್ನ ಸಿಂಗರಿಸಿಕೊಳ್ಳಬೇಕು! ಆ ವಸಂತನ ಆಗಮನಕ್ಕೆ ಚಳಿಗಾಲ ಇರಲೇ ಬೇಕಲ್ಲವೆ? ದಿನ ನಿತ್ಯವೂ ಯುಗಾದಿ ಆದಾಗ, ನಿತ್ಯೋತ್ಸವ ಆಗುತ್ತೆ! ಅದು ಮನುಷ್ಯನೊಳಗಿನ ದೈವ್ಯಕ್ಕೆ ನಿತ್ಯೋತ್ಸವ! ಇದೂ ಯುಗಾದಿಯ ಸಂದೇಶವೇ!

Wednesday, March 11, 2009

ಹುಚ್ಚು ಮನಸಿನ ಹತ್ತು ಯೋಚನೆಗಳು

ಬಹಳ ದಿನಗಳಾಯ್ತು. ಏನೂ ಬರೆದಿಲ್ಲ... ಆಗಲೆ ಎಲ್ಲಾರ್ ಹತ್ರ ಬೈಸ್ಕೊಳ್ಳೋದಾಗ್ತಿದೆ. ತ್ರಿವೇಣಿ ಆಗಲೆ ಒಮ್ಮೆ ಮುಖಕ್ಕೆ ಮಂಗಳಾರತಿ ಎತ್ತಿದ್ರು. ಸುಮ್ನೆ ಬಾಗಿಲ್ನ ತೆಗೆದಿಟ್ಟು ಹೊರಗೆ ಅಲಿಯೋಕೆ ಹೋಗಿದ್ದೀಯೇನೋ ಅಂತ ಬೇರೆ ಬೈದ್ಲು! ಸರಿ... ಬರೆಯೋಕೇನೋ ಕೂತಿದ್ದಾಗಿದೆ.... ಆದ್ರೆ ಏನ್ ಬರೀಲಿ? ಬರಿ ಅಂತ ಹೇಳೋರು, ಬರೆಯೋಕೆ ಸಲಹೆ ಕೂಡ ಕೊಡ್ಬೇಕಪ್ಪ! ಹೀಗಂತಂದ್ರೆ.. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೆ ನನ್ ಹೆಂಡ್ತಿ ಅಂದ ಹಾಗಾಗುತ್ತೆ. ಯೋಚ್ನೆ ಮಾಡ್ಬೇಕಾದ್ದೆ! ಸ್ವಲ್ಪ ಮನೆ ಕೆಲ್ಸ ಮುಗಿಸ್ತೀನಿ, ಅಷ್ಟರಲ್ಲಿ ಏನಾದ್ರೂ ಹೊಳೆದಿರುತ್ತೆ.
ಅಡಿಗೆ ಏನ್ ಮಾಡೋದು? ನಿನ್ನೆ ತಾನೆ ಅನ್ನ, ಹುಳಿ ಅಂತ ಆಯ್ತು... ಇವತ್ತೂ ಅದನ್ನೇ ಮಾಡ್ಬೇಕು ಅಂದ್ರೆ ಬೋರ್ ಹೊಡೆಯುತ್ತೆ....ಹೌದು... ಈ ಬೋರ್ ಯಾಕೆ ಹೊಡಿಯುತ್ತೆ ಅಂತ? ಸುಮ್ನೆ ಇರೋಕಾಗೊಲ್ವೇನೊ ಅದಕ್ಕೆ! ಅದರ ಹತ್ರ ಹೊಡಿಸ್ಕೊಳ್ಳೋ ಹಣೆಬರಹ ಬೇರೆ ನಂದು! ಚಪಾತಿ ಮಾಡೋದ? ನಾಳೆ ಬೇರೆ ಫ಼್ರೆಂಡ್ ಬರ್ತಿದಾನೆ... ಆಗಲೆ ಮಾಡಿದ್ರಾಗುತ್ತೆ! ಇವತ್ತು ಬಟ್ಟೆ ಬೇರೆ ಒಗೀಬೇಕು... ಸುಮ್ನೆ ನೂಡಲ್ಸ್ ಮಾಡ್ಕೊಳ್ಳೋದು ಒಳ್ಳೇದು! ಬೇಗ ಆದ್ರೂ ಆಗುತ್ತೆ... ಆಮೇಲೆ ಬಟ್ಟೇ ಒಗ್ದು.. ಬರೆಯೋಕೆ ಕೂತ್ಕೋಬಹುದು......

ಬರಿ ನೂಡಲ್ಸ್ ಹೊಟ್ಟೆ ತುಂಬ್ತಿಲ್ವೆ! ಇನ್ನೇನ್ ಮಾಡ್ಕೊಳ್ಳೋದು! ಅನ್ನಕ್ಕೆ ಇಟ್ರೆ ಜಾಸ್ತಿ ಆಗುತ್ತೆ! ಸುಮ್ನೆ ವೇಸ್ಟು. ಬಾಳೆಹಣ್ಣಿಗೆ ಸ್ವಲ್ಪ ಜೇನ್ತುಪ್ಪ ಹಾಕಿ ರಸಾಯನ ಮಾಡ್ಕೊಂಡು ತಿನ್ಬೇಕು ಅಷ್ಟೇ.... ಸುಮ್ನೆ ಹಾಗೇ ಊಟ ಮಾಡೋದ! .... ಲಾಪ್ಟಾಪ್ ನಲ್ಲಿ ಮೂವಿ ನೋಡೋದ.... ಇಲ್ಲ ಪುಸ್ತಕ ಓದೋದ? ಸುಮ್ನೆ ಮೂವಿ ಹಿಡ್ಕೊಂಡ್ರೆ.. ಸಮಯ ಹೋಗೋದೇ ಗೊತ್ತಾಗೊಲ್ಲ... ಬಟ್ಟೆ ಬೇರೆ ಒಗೀಬೇಕು. ಬುಕ್ ಓದೋದು.. ಬೆಸ್ಟು... ಯಾವ್ದನ್ನ ಓದ್ಲಿ?..... ಪಿ.ಜಿ. ವೋಡ್ ಹೌಸ್ ದು ಇದೆ... ಅದನ್ನ ನಿದ್ದೆ ಮಾಡ್ಬೇಕಾದ್ರೆ ಓದೋದು.. ಒಳ್ಳೇದು... ಸಕ್ಕತ್ ಅಲ! ನಿದ್ದೆ ಮಾಡ್ಬೇಕಾದ್ರೆ.. ಓದೋಕೆ ಆಗುತ್ತ! ಅದೇನ್ ಮಾತೋ! ನಿದ್ದೆ ಮಾಡೋಕೂ ಮುಂಚೆ ಓದಿದ್ರಾಯ್ತು! ಊಟ ಮಾಡೋ ಸಮಯದಲ್ಲಿ ಊಟಕ್ಕೆ ಗಮನ ಕೊಡ್ಬೇಕಂತೆ... ಕಷ್ಟ.. ಕಷ್ಟ....ಯಾವ್ದೂ ಬೇಡ...ಸುಮ್ನೆ ಹಾಡು ಹಾಕ್ಕೊಂಡು... ಕೇಳೋಣ.... "ನೀರಿನಲ್ಲಿ ಅಲೆಯ ಉಂಗುರ... ಭೂಮಿ ಮೆಲೆ ಹೂವಿನುಂಗುರ... "... ಸಕ್ಕತ್ ಹಾಡು.. ಚೆನ್ನಾಗಿದೆ.. ಚೆನ್ನಾಗಿದೆ... "ಮನ ಸೆಳೆದ ನಲ್ಲ.. ಕೊಟ್ಟನಲ್ಲ.. ಕೆನ್ನೆ ಮೇಲೆ ಪ್ರೀತಿಯುಂಗುರ.." ಏನ್ ಲೈನ್ಸು! ಸಕ್ಕತ್ ಅಲ... ಹುಡುಗಿ.. ಹೇಳಿದ್ರೆ.. ಪರ್ವಾಗಿಲ್ಲ.... ಇದೇನಿದು.. ಹುಡುಗನೂ ಅದನ್ನೇ ಹೇಳ್ತಿದಾನೆ!! ಎಡ್ವಟ್ಟು.... ಬರೀ ಉಂಗುರನೇ ಇದೆ.. ಹಾಡಿನ್ತುಂಬ.... ಹೆ ಹೆ ಹೆ.. "ಆಗಿ ನಿನ್ನ ಕೈಯ ಪಂಜರ... ನನ್ನ ಹೃದಯ ಒಂದು ಡಂಗುರ".... ಉಂಗುರಗೆ.. ಹೊಂದ್ಲಿ.. ಅಂತ.. ಬರೆದ್ರು.. ಅನ್ಸುತ್ತೆ... ಒಳ್ಳೇ ತಮಾಷೆ!! ಹೆ ಹೆ ಹೆ....
ಅಯ್ಯೋ!! ಟೈಮ್!! ಛೆ! ಮರ್ತೇ ಹೋಯ್ತು! ಬಟ್ಟೆ ನನೆಸಿ ಎಷ್ಟು ಹೊತ್ತಾಯ್ತು!!! ರಾತ್ರಿ ಬೇರೆ... ಮತ್ತೆ ನಿದ್ದೆ ಮಾಡೋದು ಲೇಟ್ ಆಗುತ್ತೆ... ಆಮೇಲೆ ಏಳೋದು.. ಲೇಟು... ದಡ ಬಡ ಅಂತ.. ಮತ್ತೆ ಓಡೋದು ಕೆಲ್ಸಕ್ಕೆ... ಸರಿ ಇಲ್ಲ... ಎಷ್ಟು ದಿನದಿಂದ... ಜಾಗಿಂಗ್ ಹೋಗೋಣ ಅಂತ ಅನ್ಕೊಳ್ತಿರೋದು! ನೀನು ಹೋಗೊಲ್ಲ.. ಅದು ಆಗೊಲ್ಲ ಬಿಡು! ಅದೂ ಬೀಚ್ಗೆ ಹೋಗಿ ಜಾಗಿಂಗ?!! ದೇವ್ರಿಗೇ ಪ್ರೀತಿ! ಛೆ! ಛೆ! ನಾನೇ ಹೀಗಂನ್ಕೊಂಡ್ರೆ!! ನೋ ವೇ! ಮಾಡೋಣ.. ಮಾಡೋಣ... ಟೈಮ್ ಬರುತ್ತೆ... ಕಾಲ ಬರ್ಬೇಕು ಅಷ್ಟೆ... ಈಗ ಮನೆ ಕೆಲ್ಸ ಮಾಡ್ತಿಲ್ವ! ಅದೇ ಜಾಗಿಂಗ್ ಥರ ಅಂತ ಅನ್ಕೊಳ್ಳೋದಪ್ಪ! ಈಗ್ಲೇ ಎಷ್ಟು ಸಣ್ಣ ಆಗಿದೀನಿ... ಇನ್ನೇನ್ ಆಗ್ಬೇಕು... ಬೈಸೆಪ್ಸ್ ಬರ್ಬೇಕು ಅಷ್ಟೇ... ಅದೂ ಬರುತ್ತೆ...

ಈ ಬಟ್ಟೆ ಒಗೆಯೋ ಕೆಲ್ಸ ಬೇರೆ! ಇದೆಲ್ಲ ನೋಡಿದ್ರೆ.. ಬಟ್ಟೆ ಯಾಕೆ ಬೇಕಿತ್ತು ಅನ್ಸುತ್ತೆ! ಒಂದು ವಾಷಿಂಗ್ ಮಷಿನ್ ತಗೊಳ್ಳೋಣ ಅಂದ್ರೆ.. ಬಡ್ಡೀ ಮಗಂದು.. ಕಂಪನಿ.. ಕೊಡೋ ಸಂಬ್ಳದಲ್ಲಿ.. ಅದಕ್ಕೆಲ್ಲಿ ಹೋಗ್ಲಿ! ದಿನಾ ಅನ್ಕೊಳ್ಳೋದು.. ಸ್ವಲ್ಪ ಸ್ವಲ್ಪ.. ನಿತ್ಯ ಒಕ್ಕೋಳೋಣ ಅಂತ.. ಬರೀ ಅನ್ಕೊಳ್ಳೋದೇ ಆಗ್ತಿದೆ.. ಬಿಡು... ಬೇಗ ಒಗ್ದು.. ಅದೇನ್ ಬರೆಯೋದೋ.. ಯೋಚ್ನೆ ಮಾಡ್ಬೇಕು... ತಲೆನೇ ಓಡ್ತಿಲ್ಲ... ಸರಿ ಹೋಯ್ತು.. ಫೋನ್ ಬಂತು... ಕೈಯೆಲ್ಲ.. ಒದ್ದೆ... ಹೇಗೆ ಎತ್ಕೊಳ್ಳೋದು... ಯಾರೋ ಏನ್ ಕಥೆನೋ... ಆಮೇಲೇ ನೋಡಿದ್ರಾಯ್ತು... ಬಟ್ಟೆ ಒಣಗಿ ಹಾಕ್ಬೇಕು... ಮೊದ್ಲು. ಅಪ್ಪ! ಅದೇನ್ ಕೈ ನೋವು!! ಅದ್ಯಾವಾಗ.. ಈ ಜಾಗದಿಂದ ತಪ್ಪಿಸ್ಕೊಳ್ತೀನೋ!! ದೇವ್ರಿಗೇ ಗೊತ್ತು...

ಏನ್ ಬರೆಯೋದು... ಛೆ! ಮೊದ್ಲು.. ಎಷ್ಟೊಂದು.. ಬರೀತಿದ್ದೆ... ಕಂಬಿ ಇಲ್ದೆ ರೈಲ್ ಬಿಡ್ತಿಯ ಅಂತ ಹೇಳಿದ್ರು.. ಲೆಚ್ಚರರ್! ಈಗ.. ಕಂಬಿ ಹಾಕಿದ್ರು.. ರೈಲು.. ಪ್ಲಾಟ್ಫ಼ಾರ್ಂ ಬಿಟ್ಟು ಮುಂದಕ್ಕೇ ಹೋಗ್ತಿಲ್ಲ... ತಲೆ ತುಂಬ.. ಬರೀ ಅದೂ ಇದೂ.. ಹರಟೆ... ಎಲ್ಲಿಂದ ಬರ್ಬೇಕು ಐಡಿಯಾ?!! ಸಕ್ಕತ್ ಅಲ... ತಲೆನೋವು ಬೇರೆ... ದುರ್ಭಿಕ್ಷದಲ್ಲಿ ಅಧಿಕಮಾಸವಂತೆ.... ಅಂದ್ರೆ.. ನನ್ ತಲೆ ನಲ್ಲಿ ಮಾಸ್ ಜಾಸ್ತಿ ಆಯ್ತು ಅಂತ... ಎಲ್ಲಿ ತೆಗೀಲಿ ಮಾಸ್ ನ! ಏನ್ ಯೋಚನೆಗಳಪ್ಪ.. ಲಂಗು.. ಲಗಾಮಿಲ್ದಿರಾನೇ ಓಡ್ತಿರುತ್ತೆ.... ಇವತ್ತು ಬೇಡ... ನಾಳೆ ಸ್ವಲ್ಪ ಸೀರಿಯಸ್ಸಾಗಿ.. ಯೋಚ್ನೆ ಮಾಡಿ.. ಏನಾದ್ರೂ ಬರೆಯೋಣ..... ಈಗ ನಿದ್ದೆ ಮಾಡಿದ್ರಾಯ್ತು...

Thursday, February 26, 2009

ಏಕೆ ಬಾರದಿಹನೆ ಸಖಿ ಮಾಧವನು ...?

ಏಕೆ ಬಾರದಿಹನೆ ಸಖಿ ಮಾಧವನು?
ಎನ್ನ ವಿರಹ ತಿಳಿಯನೇನೆ ಪ್ರಿಯ ಸಖನು?


ಪೂರ್ಣ ಚಂದ್ರನಿರುವಿನಲ್ಲಿ ಕೊಳಲನೂದಿ ಕರೆದನಿಲ್ಲಿ
ಎನ್ನ ಉಸಿರ ಬಿಸಿಯ ತಾಪಕವನ ಉಸಿರ ಬೆರೆಸಲಿಲ್ಲಿ
ಮರವ ಬಳಸಿ ಬೆಳೆವ ಬಳ್ಳಿ ಸುಮವ ಬಿರಿವ ಚಂದದಲ್ಲಿ
ತನುಗಲೆರಡು ಬೆರೆತು ದಿವ್ಯ ಪ್ರೇಮವರಳಲೆಂದ ಕೃಷ್ಣ


ತಿರೆಯ ತಣಿಸೆ ವರ್ಷ ಧಾರೆ ಮುಗಿಲ ಸೀಳಿ ಸುರಿಯುವಂತೆ
ತನ್ನ ಅಧರ ಸುಧೆಯ ಸುರಿಸಿ ಎನ್ನ ಮನವ ತಣಿಪನಂತೆ
ಬಿಗಿದ ರವಿಕೆ ಸಡಿಲಗೊಳಿಸಿ ರಾಧೆ ನಿನ್ನ ಕೇಶ ಬಿಡಿಸಿ
ನಾಚೆ ಮೊಗದ ರಂಗು ನೋಡೆ ಬರುವೆನೆಂದು ನುಡಿದ ಕೃಷ್ಣ


ಭ್ರಮರ ತಾನು ಸುಮವ ಕಂಡು ಮಧುವ ಹೀರಿ ನಲಿಯುವಂತೆ
ರವಿಯ ಕಿರಣ ಸೋಕೆ ಅದರಹೊನಲ ಬೆಳಕಿನಲ್ಲಿ
ಎನ್ನ ವದನ ಕಂಡು ನಿನ್ನ ಮೊಗದ ಕಾಂತಿ ಹೊಳೆಯೆ
ಅದರ ಹೊನಲ ಬೆಳಕಿನಲ್ಲಿ ರಮಿಸೆ ಬರುವೆನೆಂದ ಕೃಷ್ಣ

ನಲಿವ ಯಮುನೆ ತೀರದಲ್ಲಿ ಚಂದ್ರನಿಣುಕಿ ನೋಡದಲ್ಲಿ
ಮೇಘಶ್ಯಾಮನೆದೆಗೆ ಎನ್ನ ಹಣೆಯ ಕೆಂಪೆ ರಂಗವಲ್ಲಿ
ಇಂಥ ನಮ್ಮ ಮಿಲನ ಕಂಡು ಪ್ರಕೃತಿ ತಾನು ಮೋದಗೊಂಡು
ನವ್ಯ ಸೃಷ್ಟಿ ಸೃಜಿಪ ದಿವ್ಯ ನೋಟ ಕಾಣಲೆಂದು ಕೃಷ್ಣ

-ಪ್ರವೀಣ

Friday, January 30, 2009

ಓ ಬಾ ಅತಿಥಿ .....

ಬಹಳ ದಿನಗಳ ಬಯಕೆ ಇವತ್ತು ಪೂರೈಸ್ತು.... ನನ್ನ ಮೊಟ್ಟಮೊದಲ ಕನ್ನಡ ಬ್ಲಾಗ್ ಇವತ್ತು ತೆರೆ ಕಂಡಿದೆ. ಎಷ್ಟೋ ವರ್ಷಗಳಾದ ಮೇಲೆ ಮತ್ತೆ ಬರವಣಿಗೆ ಶುರುವಾಗಿದೆ. ಏನ್ ಬರೀಬೇಕು ಅಂತ ಇನ್ನು ತಿಳಿದಿಲ್ಲ... ಆದರೆ ಅದರ ಚಿಂತೆ ಏನಿಲ್ಲ ಬಿಡಿ... ಮನಸ್ಸಿನ ಮಾತುಗಳಿಗೆನು ಕೊರತೆ ಇಲ್ಲ... ಕಥೆಗಳ ರೂಪದಲ್ಲೋ... ಕವನಗಳ ರೂಪದಲ್ಲೋ... ಹರಟೆ ಆಗಿನೋ... ಕೇಳೋರು ಇರ್ಲಿ.. ಇಲ್ದೆ ಇರ್ಲಿ.. "ಹಾಡುವುದು ಅನಿವಾರ್ಯ ಕರ್ಮ ನನಗೆ" ಅಂತ ಮಾತು ಹೊರಡ್ತಾನೆ ಇರುತ್ತೆ.


ಹೀಗೆ ಹೋಗಿ ಬರ್ತಾ... ಒಮ್ಮೊಮ್ಮೆ ಇಣಿಕಿ ನೋಡಿ, ಹಿಡಿಸೋ ಮಾತುಗಳಿದ್ರೆ ಬನ್ನಿ, ಸ್ವಲ್ಪ ಹೊತ್ತು ಸಮಯ ಕಳೆಯೋಣ. ಸಂವಾದದಲ್ಲಿ ... ಹಾಗೆ "ಸಂ"ವಾದಗಳೂ ಆಗಬಹುದೇನೋ!! ;) ಆಗಲೀ! ಅದಕ್ಕೇನಂತೆ? ಅಲ್ವಾ?! ಮುಖ್ಯವಾಗಿ "ಸ್ಫಟಿಕದ ಸಲಾಕೆಯಂತಿರಬೇಕು", "ಮುತ್ತಿನ ಹಾರದಂತಿರಬೇಕು".


ಯಾವುದರ ಬಗ್ಗೆ ಹರಟೆ ಹೊಡೆಯೋಣ ಅಂತ ಕೇಳ್ತೀರಾ? ಹರಟೆಗೆ ಎಂತದ್ರೀ ವಿಷಯ ಅಲ್ವೇ? ಮನಸ್ಸಿಗೆ ಹಿಡಿಸಿದ ಹಾಡುಗಳಿಂದ ಹಿಡಿದು... ಹಿಡಿಸದ ವಿಷಯಗಳ ಬಗ್ಗೆ, ರವಿ ಮುಟ್ಟಿದ್ದು.. ಕವಿ ಕಂಡಿದ್ದರ ಬಗ್ಗೆ, ಒಂದೆ ಎರಡೇ... "ಈ ಸಂಭಾಷಣೆ ... ನಮ್ಮಇ-ಸಂಭಾಷಣೆ .. ಅತಿ ನವ್ಯ ... ರಸ ಕಾವ್ಯ.. ಮಧುರ.. ಮಧುರ .. ಮಧುರ"ವಾಗಿರಲಿ ಅನ್ನೋದೇ ಉದ್ದೇಶ.

ಮನೆ ತೆರೆದಿದೆ... ಅತಿಥಿಗಳಾಗಿ ಒಳಗೆ ಬನ್ನಿ... ಮನೆಯವರಾಗಿ ಇಲ್ಲೇ ಉಳೀತೀರ ಅನ್ನೋ ಆಸೆಯಿಂದ ಬಾಗಿಲನ್ನ ತೆರೆದಿದ್ದೇನೆ. :)