Wednesday, February 3, 2010

ಓ ಸುಪ್ತ ಚೇತನ!

ಹಲವು ತಿಂಗಳುಗಳ ಹಿಂದೆ ಬೇಸರದಲ್ಲಿ ಗೀಚಿದ್ದ ಮೊದಲ ನಾಲ್ಕು ಸಾಲುಗಳು, ಹಳೇ ಹಾಳೆಗಳ ಮಧ್ಯೆ ಸಿಲುಕಿ ಕಳೆದು ಹೋಗಿದ್ದು, ಕಣ್ಣಿಗೆ ಬಿತ್ತು. ಅರೆ ಬರೆಯಾಗಿದ್ದ ಭ್ರೂಣಕ್ಕೆ ಪೂರ್ಣ ರೂಪಕೊಟ್ಟು, ನಿಮ್ಮ ಮುಂದೆ ಇರಿಸಿದ್ದೇನೆ.



ಆಗುಹೋಗುಗಳ ನೂಕುನುಗ್ಗಲಿನಲ್ಲಿ
ನಾನಿರುವ ನಾನಾಗಹೊರಟಿರುವ ಇಕ್ಕೆಲದಲ್ಲಿ
ಬಯಕೆಯಾಮಿಷಗಳ ಗೊಂದಲ ಗೋಜಲು.
ಸಿಲುಕಿ ನರಳಿ ಬೆಂಡಾದ ಇರುವನ್ನು
ತೊರೆದೆಲ್ಲಿ ಅಡಗಿರುವೆ ಓ ಸುಪ್ತ ಚೇತನ?!

ನಿನ್ನೆಯ ನಿರ್ಣಯಕೆ ಇಂದೆನಗೆ ಶಿಕ್ಷೆಯೋ?
ಜಡಿದ ಸಂಕೋಲೆಯೊಲು ಹಾರುವ ಪರೀಕ್ಷೆಯೋ?
ಅಗ್ನಿಶಿಖೆ ಧರೆಯಾಗಿ ಕೋಲ್ಮಿಂಚು ಮುಗಿಲಾಗಿ
ರೋದಿಸುತ ಕನಲಿರುವ ಏಕಾಂಗಿ ಮನವನ್ನು
ತೊರೆದೆಲ್ಲಿ ಅಡಗಿರುವೆ ಓ ಸುಪ್ತ ಚೇತನ?!

ನೀನೊಮ್ಮೆ ಸಲಹಿದ್ದೆ, ಮುದ್ದಾಡಿ ಬೆಳೆಸಿದ್ದೆ!
ವಾತ್ಸಲ್ಯ ಭೋರ್ಗರೆಸಿ, ಸತ್ವದ ಸುಧೆಯುಣಿಸಿ,
ಜೀವಿತದ ಅರ್ಥವನು ಗುರುವಾಗಿ ತೋರಿದ್ದೆ
ಇಂದೆಲ್ಲ ಮರೆತಿರುವೆ, ದಾರಿಯನು ತಪ್ಪಿರುವೆನೆಂದೆನ್ನ
ತೊರೆದೆಲ್ಲಿ ಅಡಗಿರುವೆ ಓ ಸುಪ್ತ ಚೇತನ?!

ಎನ್ನ ನಿರ್ವಿಕಾರ ದೈವದ ಅನುಭೂತಿ ನೀನು!
ಎನ್ನ ಸಾಕಾರ ಸಾರ್ಥಕ್ಯ ರೂವಾರಿ ನೀನು!
ಮರಳಿ ಬಾ ಬೇಡುವೆನು... ಶಬರಿಯೊಳು ಕಾಯುವೆನು
ಶಿಲೆಯಾದ ತಮವಾದ ಜಡವಾದ ಜೀವಕೆ ರಾಮನಾಗಿ
ಉದ್ಧರಿಸು ಬಾ, ಉತ್ಸಹಿಸು ಬಾ ಓ ಸುಪ್ತ ಚೇತನ!!


-ಪ್ರವೀಣ